ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಯಕ್ಷಗಾನ ಮೇಳ
Share
ಶ್ರೀ ಕ್ಷೇತ್ರ ಮಂದಾರ್ತಿ ಮೇಳಗಳು ಮತ್ತು ಹರಕೆ ಬಯಲಾಟ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ಜುಲೈ 23 , 2015

ಯಕ್ಷಗಾನಕ್ಕೆ ಪ್ರೇಕ್ಷಕರಿಲ್ಲ ಎಂಬ ಕೊರಗು ಒಂದೆಡೆ, ಯಕ್ಷಗಾನ ಕಲಾವಿದರು ಹೊಸದಾಗಿ ತಯಾರಾಗುದಿಲ್ಲ ಎಂಬ ಕೂಗು ಇನ್ನೊಂದೆಡೆಯಾದರೆ ಯಕ್ಷಗಾನದ ಹೊಸ ಹೊಸ ಮೇಳಗಳು ಪ್ರತೀ ವರ್ಷ ಹುಟ್ಟಿಕೊಳ್ಳುತ್ತಾ ಇರುವುದು ಯಕ್ಷಗಾನ ಕಲೆಯ ವೈಶಿಷ್ಯವೇ ಇರಬೇಕು. ಕರಾವಳಿ ಜನರ ಜೀವನದಲ್ಲಿ ಹಾಸುಹೊಕ್ಕಾದ ಈ ಕಲೆಯು ಅವರ ಜೀವನಾಡಿ. ಈಗಂತೂ ಇಡೀ ಅವಿಭಜಿತ ದ. ಕ. ಜಿಲ್ಲೆಯಲ್ಲಿ ಸುಮಾರು 32ಕ್ಕೂ ಅಧಿಕ ಮೇಳಗಳು ಆರು ತಿಂಗಳು ತಿರುಗಾಟ ಮಾಡಿದರೆ ಅನೇಕ ಹವ್ಯಾಸಿ ಮೇಳಗಳು, ಮಕ್ಕಳ ಮೇಳಗಳು, ಮಹಿಳಾ ತಂಡಗಳು, ಕಾಲಮಿತಿ ತಂಡಗಳು ಕೇವಲ 3-4 ಜಿಲ್ಲೆಗಳಲ್ಲಿ ತಿರುಗಾಟ ಮಾಡುತ್ತಿರುವುದು ಗಿನ್ನೀಸ್ ದಾಖಲೆಗೆ ಯೋಗ್ಯವಾದ ಸಂಗತಿ.

ಕೇವಲ ಆಟವಲ್ಲ, ಇದು ``ಬೆಳಕಿನ ಸೇವೆ``

ಕರಾವಳಿ ಜನರು ಯಕ್ಷಗಾನವನ್ನು ಕೇವಲ ಮನೋರಂಜನೆಯಾಗಿ ತೆಗೆದುಕೊಳ್ಳುವುದಿಲ್ಲ. ಅದನ್ನು ಆರಾಧನಾ ಕಲೆ ಎಂದು ಭಕ್ತಿಯಿಂದ ನೋಡುತಿದ್ದಾರೆ. ಜಗತ್ತಿನ ಯಾವ ಕಲೆಯಲ್ಲೂ ಕಲಾವಿದ ಬಣ್ಣ ಹಚ್ಚಿಕೊಳ್ಳುವ ಚೌಕಿಯಲ್ಲಿ ಗಣಪತಿ ಪೂಜೆ ಆಗುವ ಕ್ರಮ ಇದ್ದ ಹಾಗೆ ಇಲ್ಲ. ಭರತನಾಟ್ಯದಲ್ಲಿಯೂ ಕಲಾವಿದ ರಂಗದಲ್ಲಿಯೇ ದೇವರಪೂಜೆ ಮಾಡುವ ಕ್ರಮವಿದೆ. ಗಣಪತಿ ಪೂಜೆಯಲ್ಲಿ ಹಚ್ಚಿ ಕೊಟ್ಟ ದೀಪ ಹರಕೆ ಆಡಿಸುವವನ ಮನೆಯ ಚಾವಡಿಯಲ್ಲಿ ಭೆಳಗಿನ ಮಂಗಳದತನಕ ಉರಿಯುತ್ತಿರಬೇಕು ಎಂಬ ನಂಬಿಕೆ ಆಟ ಆಡಿಸಿದ ಭಕ್ತರದ್ದು. ಆಟವನ್ನೂ ನೋಡದೆ ಮನೆಯಲ್ಲಿ ಆ ದೀಪ ಆರಿಹೋಗದಂತೆ ಕಾಯುವ ಕೆಲಸ ಮನೆಯ ಯಜಮಾನನ ಹೆಂಡತಿಯದ್ದು. ವಿದ್ಯುದೀಪದಿಂದ ಕಂಗೊಳಿಸುವ ಇಂದಿನ ಆದುನಿಕ ರಂಗಸ್ಥಳದಲ್ಲೂ ಹರಕೆ ಆಟದ ರಂಗಸ್ಥಳದಲ್ಲಿ ಎರಡುಕಡೆ ಹತ್ತಿಯ ಭಟ್ಟೆಯಿಂದ ಉರಿಯುವ ಎರಡು ದಿವಟಿಗೆ ದೀಪ ಇದಕ್ಕೆ ಇನ್ನೊಂದು ಸಾಕ್ಷಿ . ಈ ಕಾರಣದಿಂದ ಕುಂದಾಪುರ ಪರಿಸರದಲ್ಲಿ ಹರಕೆ ಆಟವನ್ನು ``ಬೆಳಕಿನ ಸೇವೆ`` ಎಂದು ಕರೆಯೂದು ವಾಡಿಕೆ.

ಬೆಳಕು ಜ್ಞಾನದ ಸಂಕೇತ. ಒಂದು ರಾತ್ರಿ ಇಡೀ ಎಣ್ಣೆಯ ದೀಪ ಉರಿದಾಗ ಭೂತ ಪಿಶಾಚಿಗಳು ದೂರ ಸರಿಯುತ್ತದೆ ಎಂಬ ನಂಬಿಕೆ ನಮ್ಮ ಕರಾವಳಿ ಜನರದ್ದು. ಹೀಗೆ ಸಂತಾನ ಬಾಗ್ಯಕ್ಕಾಗಿ ಕಷ್ಟ ಪರಿಹಾರಕ್ಕಾಗಿ ಹರಕೆ ಬಯಲಾಟ ಅಥವಾ ಬೆಳಕಿನ ಸೇವೆಯನ್ನು ದೇವರಿಗೆ ಹೇಳಿಕೊಳ್ಳುವುದು ವಾಡಿಕೆ. ಇಷ್ಟೊಂದು ಹರಕೆ ಬಯಲಾಟಗಳು ಸೇವೆ ಪೂರೈಸುತಿದ್ದರೂ ಬಹಳ ವರ್ಷದವರೆಗೂ ಆಟ ಸಿಗದೆ ಸರದಿಯಲ್ಲಿ ಕಾಯುವುದು ನೋಡಿದರೆ ಹರಕೆ ಆಟ ಆಡಿಸಿದ ಹರಕೆದಾರರ ಇಷ್ಟಾರ್ಥ ನೆರವೇರಿದೆ ಎನ್ನುವುದೇ ಸಾಕ್ಷಿ. ಇಂತಹ ಹರಕೆ ಆಟ ಆಡುವ ಮೇಳಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು, ಬಪ್ಪನಾಡು, ಸಸಿಹಿತ್ಲು, ಮುಂತಾದ ತೆಂಕಿನ ಮೇಳಗಳು, ಶ್ರೀಕ್ಷೇತ್ರ ಮಂದಾರ್ತಿ, ಮಾರಣಕಟ್ಟೆ, ಅಮೃತೇಶ್ವರಿ, ಕಮಲಶಿಲೆ, ಸೌಕೂರು, ಹಾಲಾಡಿ. ಸಿಗಂದೂರು, ಆಜ್ರಿ, ಗೋಳಿಗರಡಿ, ನೀಲಾವರ‍, ಹಿರಿಯಡ್ಕ ಮೇಳಗಳು ಪ್ರಮುಖವಾದವುಗಳು.

ವಿಶೇಷವೆಂದರೆ ಈ ಎಲ್ಲಾ ಮೇಳಗಳು ಶಿವನ ಯಾ ಶಿವನ ಕುಟುಂಬದ ದೇವರ ಸನ್ನಿಧಾನದಿಂದಲೇ ಹೊರಟವುಗಳು. ಅದರಲ್ಲೂ ದೇವಿ ದುರ್ಗಾಪರಮೇಶ್ವರಿಗೆ ಅತೀ ಪ್ರಿಯವಾದ ಸೇವೆ ಬೆಳಕಿನ ಸೇವೆ. ಹಾಗಾಗಿ ಬಡಗಿನ ಮಂದಾರ್ತಿ ಮೇಳ ಐದೂ ಮೇಳಗಳನ್ನೂ. ತೆಂಕಿನ ಕಟೀಲೂ ಮೇಳ ಆರೂ ಮೇಳಗಳನ್ನೂ ಹೊಂದಿದ್ದರೂ ಮುಂದಿನ ಇಪ್ಪತ್ತಕ್ಕೂ ಅದಿಕ ವರ್ಷಗಳವರೆಗೆ ಆಟ ಬುಕ್ಕಿಂಗ್ ಆಗಿದೆ ಅಂದರೆ ಬಹುಶ ದೇವಿಯ ಶಕ್ತಿ. ಇಷ್ಟಾರ್ಥ ನೆರವೇರಿಸುವ ಇಚ್ಚಾಶಕ್ತಿಯೇ ಇರಬೇಕು. ಉಳಿದಂತೆ ಉಳಿದ ಮೇಳಗಳು ಇಡೀ ಅಥವಾ ಅರ್ದ ತಿರುಗಾಟವನ್ನು ಹರಕೆ ಬಯಲಾಟವಾಗೀಯೇ ಆಡುವುದು ವಿಶೇಷ . ಆದರೆ ವಿಷ್ಣು ಸನ್ನಿದಾನದಿಂದ ಹೊರಟ ಸಾಲಿಗ್ರಾಮ, ಪೆರ್ಡೂರು ಮೇಳಗಳು ಡೇರೆ ಮೇಳವಾಗಿಯೇ ಉಳಿದಿರುವುದು ಇನ್ನೊಂದು ವಿಶೇಷ. ಇನ್ನೊಂದು ಖ್ಯಾತ ಮೇಳ ಹೊಸನಗರ ಮೇಳ ಬಯಲಾಟದಿಂದಲೇ ಪ್ರಸಿದ್ದಿ ಪಡೆದಿದೆ. ಇಂತಹ ಕೇವಲ ಹರಕೆ ಬಯಲಾಟವನ್ನೇ ಆಡುತ್ತಿರುವ ಮೇಳಗಳಲ್ಲಿ ಬಡಗುತಿಟ್ತಿನಲ್ಲಿ ಪ್ರಸಿದ್ದಿ ಪಡೆದ ಆದಿ ಮೇಳವೆಂದರೆ ಸದ್ಯ ಐದು ಮೇಳಗಳನ್ನು ಹೊಂದಿದ ಶ್ರೀ ಕ್ಷೇತ್ರ ಮಂದಾರ್ತಿ ಮೇಳ. ಕಲಾಮಾತೆಯಾದ ಶ್ರಿ ದೇವಿಗೆ ಯಕ್ಷಗಾನ ಸೇವೆ ಅತೀ ಪ್ರೀತಿಯ ಸೇವೆ. ಮಂದಾರ್ತಿ ಮಾತೆ ಯಕ್ಷಗಾನ ಪ್ರೀತೆ ಎನ್ನುವುದು ಪ್ರತೀತಿ.

ಶ್ರೀ ಕ್ಷೇತ್ರ ಮಂದಾರ್ತಿ ಹಿನ್ನೆಲೆ, ಸ್ಥಳ ಪುರಾಣ

ನಾಗಲೋಕದ ಒಂದು ಭಾಗದ ಅಧಿಕಾರಿಯಾದ ಶಂಖಚೂಡನು ಶಿವನ ಅನುಗ್ರಹದಿಂದ ಪಡೆದ ಐದು ಮಂದಿ ಹೆಣ್ಣು ಮಕ್ಕಳಲ್ಲಿ ಮಂದರತಿ ಎನ್ನುವವಳು ಬಂದು ನೆಲಸಿದ ಸ್ಥಳವೇ ಮಂದಾರ್ತಿ ಇನ್ನೋಬ್ಬಳು ನೀಲರತಿ ನೆಲಸಿದ ತಾಣ ಶ್ರೀ ಕ್ಷೇತ್ರ ನೀಲಾವರ. ಮುಂದೆ ರಾಜನಾದ ದೇವವರ್ಮನಿಗೆ ಕನಸಿನಲ್ಲಿ ಕಾಣಿಸಿಕೊಂಡ ದೇವಿ ವಾರಾಹಿ ನದಿಯಲ್ಲಿರುವ ದುರ್ಗಾಪರಮೇಶ್ವರಿಯ ವಿಗ್ರಹವನ್ನು ಮಂದಾರ್ತಿಯಲ್ಲಿ ಸ್ಥಾಪಿಸಲು ಹೇಳಿದ ಪ್ರಕಾರ ಆತನು ವಿಗ್ರಹ ಪ್ರತಿಷ್ಟೆ ಮಾಡಿ ದೇವಾಲಯ ಕಟ್ಟಿಸಿದನೆಂದು ಪ್ರತೀತಿ.

ಸುರಗಿಹಳ್ಳಿ ಅಂತು ಎನ್ನುವ ದರೋಡೆಕೋರನು ಶ್ರೀಮಂತರ ಹಾಗೂ ದೇವಾಲಯದ ಹಣವನ್ನು ಕೊಳ್ಳೆ ಹೊಡೆದು ಬಡಬಗ್ಗರಿಗೆ ಹಂಚುತಿದ್ದನು. ಒಮ್ಮೆ ಆತ ಆನೆಗುಡ್ಡೆಯ (ಕುಂಬಾಸಿ) ಗಣಪತಿ ದೇವಸ್ಥಾನಕ್ಕೆ ನುಗ್ಗಿದ್ದಾಗ ಗಣಪತಿಯು ಆನೆಯ ರೂಪದಲ್ಲಿ ಅವನನ್ನು ಅಡ್ಡೈಸಿದ. ಆಗ ಅಂತುವು ಗಣಪತಿಯನ್ನು ಪ್ರಾರ್ಥಿಸಲು ಪ್ರತ್ಯಕ್ಷನಾದ ಗಣಪತಿ ನೀನೊಬ್ಬನೇ ಶುಚೀರ್ಬೂತನಾಗಿ ಒಳಬಂದು ನಿನಗೆ ಸಿಕ್ಕಿದ ವಸ್ತುವನ್ನು ಕೊಂಡುಹೋಗು ಎಂದು ಅಪ್ಪಣೆ ಮಾಡುತ್ತಾನೆ. ಹಾಗೆ ಮೊದಲು ಕೈಗೆ ಸಿಕ್ಕಿದ ಪೆಟ್ಟಿಗೆಯನ್ನು ಹೊತ್ತು ಹೋಗುವಾಗ ಮಂದಾರ್ತಿ ಸಮೀಪ ಪೆಟ್ಟಿಗೆ ಬಾರವಾಗುತ್ತಾ ಹೋಗಿ ಇಳಿಸುತ್ತಾನೆ. ಅದರಲ್ಲಿ ಗಣಪತಿ ವಿಗ್ರಹ ಮತ್ತು ಒಂದು ಜೊತೆ ಗೆಜ್ಜೆ ಮಾತ್ರ ಇರುತ್ತದೆ. ಅದನ್ನು ಅಲ್ಲಿಯೆ ಇಳಿಸಿ ಗಣಪತಿಯನ್ನು ಅಲ್ಲಿಯೇ ಸ್ಥಾಪಿಸುತ್ತಾನೆ. ಇಂದು ಅದೇ ಊರುಬಾರಾಳಿ ಎಂದು ಪ್ರಸಿದ್ದಿ.

ಮೇಳದಲ್ಲಿ ಒಬ್ಬರಾದರೂ ಪ್ರಧಾನ ಗಾಣಿಗ ಕಲಾವಿದ

ಅದೇ ಗಣಪತಿ ದೇವಸ್ಥಾನದಲ್ಲಿ ಮಂದಾರ್ತಿ ಮೇಳದ ಪ್ರಥಮ ಸೇವೆ ಆಟದಂದು ಕಲಾವಿದರು ಗೆಜ್ಜೆ ಕಟ್ಟುವುದು ವಾಡಿಕೆ. ಗೆಜ್ಜೆಯನ್ನು ಹಿಡಿದ ಅಂತುವಿನ ಮಿತ್ರರು ಕುಣಿಯಲು ಪ್ರಾರಂಬಿಸಿದಾಗ ಬಾರಾಳಿ ಗಣಪತಿ ಪ್ರತ್ಯಕ್ಷವಾಗಿ ಗೆಜ್ಜೆಯನ್ನು ಮಂದಾರ್ತಿಗೆ ಕೊಂಡು ಹೋಗಿ ಮೇಳ ಪ್ರಾರಂಭಿಸು ಎಂದು ಆಜ್ಞಾಪಿಸುತ್ತಾನೆ . ಅಂತೆಯೇ ಅಂದಿನಿಂದ ಮೊದಲ್ಗೊಂಡು ಶ್ರೀ ಮಂದಾರ್ತಿ ಮೇಳ ಗಾಣಿಗರ ಅಂತುವಿನಿಂದ ಪ್ರಾರಂಭವಾಯಿತು ಎನ್ನುದನ್ನು ಸ್ಥಳ ಪುರಾಣ ಹೇಳುತ್ತದೆ. ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗರಿಂದ ಮೊದಲ್ಗೊಂಡು ಇಂದಿನವರೆಗೂ ಮಂದಾರ್ತಿ ಮೇಳದಲ್ಲಿ ಕನಿಷ್ಟ ಒಬ್ಬರಾದರೂ ಪ್ರಧಾನ ಗಾಣಿಗ ಕಲಾವಿದರಿರುವುದು ವಿಶೇಷ. ಸದ್ಯ ಅಜ್ರಿ ಗೋಪಾಲ ಗೋಪಾಲ ಗಾಣಿಗರು ಒಂದು ಮೇಳದ ಪ್ರಧಾನ ಎರಡನೇ ವೇಷಧಾರಿಯಾಗಿದ್ದಾರೆ.

ಅಜ್ರಿ ಗೋಪಾಲ ಗೋಪಾಲ ಗಾಣಿಗರು

2035-36ನೇ ಇಸವಿ ವರೆಗೆ ಐದೂ ಮೇಳಕ್ಕೆ ಆಟ ಮುಂಗಡ ಬುಕ್ಕಿಂಗ್

ಮಂದಾರ್ತಿ ಮೇಳವು ಕೇವಲ ಮನೋರಂಜನೆಗಾಗಿ ಸ್ಥಾಪಿಸಲ್ಪಡದೆ ಶ್ರೀ ದೇವಿಯ ಹರಕೆಯಲ್ಲಿ ಯಕ್ಷಗಾನ ಬಯಲಾಟ ಅಥವಾ ಬೆಳಕಿನ ಸೇವೆ ಅತೀ ಮುಖ್ಯವೆಣಿಸಿದೆ. ಈ ಕಾರಣದಿಂದ ಮೇಳವನ್ನು ಹಿಂದಿನವರು ಹಾಕಿಕೊಟ್ಟ ಉಚ್ಛ ಸಂಪ್ರದಾಯದಂತೆ ನಡೆಸಲಾಗುತ್ತದೆ. ತಮ್ಮ ಇಷ್ಟಾರ್ಥ ಸಿದ್ದಿಗಾಗಿ, ಸಂತಾನ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ಉಡುಪಿ - ಶಿವಮೊಗ್ಗ - ಚಿಕ್ಕಮಗಳೂರು ಜಿಲ್ಲೆಯ ಭಕ್ತರು ಆಟ ಆಡಿಸುತ್ತಾರೆ. ಐದೂ ಮೇಳಗಳಿಗೆ ಮೂರು ತಿಂಗಳ ಆಟ ಘಟ್ಟದ ಪ್ರಾಂತ್ಯಗಳಲ್ಲಿ ಆಗುತ್ತಿರುವುದು ವಿಶೇಷ. ಶ್ರೀ ಕ್ಷೇತ್ರಕ್ಕೆ ಘಟ್ಟದ ಮೇಲಿನ ಭಕ್ತಾದಿಗಳು ಹೆಚ್ಚು ಇರುವುದು ಇದಕ್ಕೆ ಕಾರಣವಿರಬಹುದು. ಮೊದಲು ಮೇಳವನ್ನು ಏಲಂ ಮೂಲಕ ನೆರವೇರಿಸಲ್ಪಡುತಿದ್ದು ಸದ್ಯ ದೇವಸ್ಥಾನದ ವತಿಯಿಂದ ಐದು ಮೇಳಗಳು ಆರು ತಿಂಗಳು ಆಟ ಮಾಡುತಿದ್ದು ಸುಮಾರು ಹದಿನೆಂಟು ಕಟ್ಟುಕಟ್ಟಳೆ ಆಟ ಎರಡು ತಿಂಗಳಿಗಾಗುವಷ್ಟು ಖಾಯಂ ಹರಕೆ ಆಟ ಸಹಿತ 900 ಆಟಗಳು ವರ್ಷಕ್ಕೆ ನೆರವೇರುತ್ತದೆ. ಸದ್ಯ 2035-36ನೇ ಇಸವಿ ವರೆಗೆ ಐದೂ ಮೇಳಕ್ಕೆ ಆಟ ಮುಂಗಡ ಬುಕ್ಕಿಂಗ್ ಆಗಿದ್ದು ಈಗ ಬುಕ್ಕಿಂಗ್ ಮಾಡುವವರಿಗೆ 2037ರ ಹಾಗೆ ಸಿಗುವ ಸಾಧ್ಯತೆ ಇದೆ.

ಮಳೆಗಾಲದಲ್ಲೂ ಆಟ ಆಡಿಸುವ ಏರ್ಪಾಡನ್ನು ಮಾಡುವ ಇರಾದೆಯನ್ನು ಆಡಳಿತ ಮಂಡಳಿ ಹೊಂದಿದ್ದು ಇನ್ನೂ ಸಹ ಸೂಕ್ತ ನಿರ್ಣಯ ಕೈಗೊಂಡಿಲ್ಲ. ಕಲಾವಿದರ ಕೊರತೆಯಿಂದ ಇನ್ನಷ್ಟು ಮೇಳವನ್ನು ನಡೆಸುವುದು ಸಹ ಕಷ್ಟ ಸಾದ್ಯ. ಮಂದಾರ್ತಿ ಮೇಳದ ತಿರುಗಾಟದಲ್ಲಿ ಹರಾಡಿ ರಾಮಗಾಣಿಗರು ಪ್ರಮುಖ ವೇಷಧಾರಿಯಾಗಿ ಸೇವೆ ಸಲ್ಲಿ ಯಕ್ಷಗಾನಕ್ಕೆ ಪ್ರಥಮ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟವರು. ನಲವತ್ತು ವರ್ಷ ಒಂದೇ ಮೇಳದಲ್ಲಿ ಸೇವೆ ಸಲ್ಲಿಸಿ ಯಕ್ಷಗಾನ ಕಲೆಗೂ ಮಂದಾರ್ತಿ ಮೇಳಕ್ಕೂ ಕೀರ್ತಿ ತಂದವರು. ಮಂದಾರ್ತಿ ಮೇಳದ ಆಟ ನೋಡುವುದು ದೀವಟಿಗೆ ನೋಡುವುದನ್ನೂ ಹರಕೆ ಹೇಳಿಕೊಳ್ಳುವ ಅನೇಕ ಭಕ್ತರಿದ್ದಾರೆ. ಮಂದಾರ್ತಿ ಮೇಳದ ಬಣ್ಣವನ್ನು ಹಚ್ಚಿದರೆ ಚರ್ಮರೋಗ ನಿವಾರಣೆಯಾಗುತ್ತದೆ ಎಂಬೂದು ಪ್ರತೀತಿ.

ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದ ಖ್ಯಾತಿವೆತ್ತ ಅನೇಕ ಕಲಾವಿದರು

ಬಡಗುತಿಟ್ಟಿನ ವಿವಿದ ಮೇಳಗಳಲ್ಲಿ ಖ್ಯಾತಿವೆತ್ತ ಅನೇಕ ಕಲಾವಿದರು ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದವರು ಎನ್ನುವುದು ಸಾರ್ವತ್ರಿಕ ಸತ್ಯ. ಅದರಲ್ಲಿ ಕುಂಜಾಲು ಶೆಷಗಿರಿ ಕಿಣಿ, ಜಾನುವಾರುಕಟ್ಟೆ ಬಾಗವತರು, ಹಿರಿಯಡ್ಕ ಗೋಪಾಲ ರಾವ್, ಗೋರ್ಪಾಡಿ ವಿಠಲ ಪಾಟೀಲ್. ಬಣ್ಣದ ಸಕ್ಕಟ್ಟು, ಹರಾಡಿ ಮನೆತನದ ಎಲ್ಲಾ ಏಳು ತಲೆಮಾರಿನ ಕಲಾವಿದರು, ಶಿರಿಯಾರ ಮಂಜುನಾಯ್ಕ್, ಕೋಟ ವೈಕುಂಠ, ಅರಾಟೆ ಮಂಜು ನಾಯ್ಕ್, ಹಳ್ಳಾಡಿ ಮಂಜಯ್ಯ ಶೆಟ್ಟಿ, ನೀಲಾವರ ಮಹಾಬಲ ಶೆಟ್ಟಿ, ರಾಮ ನಾಯರಿ ಇಂದಿನ ಕಲಾವಿದರಾದ ಶಶಿಕಾಂತ ಶೆಟ್ಟಿ, ಪ್ರಸನ್ನ ಶೆಟ್ಟಿಗಾರ್, ಚಂದ್ರಹಾಸ ಗೌಡ ಮುಂತಾದವರು ಪ್ರಮುಖರು. ವರ್ಷಕೊಮ್ಮೆ ಮಂದಾರ್ತಿ ಮೇಳದ ಆಟವನ್ನೂ, ಕನಿಷ್ಟ ರಾತ್ರಿ 8:30ಕ್ಕೆ ನಡೆಯುವ ಗಣಪತಿ ಪೂಜೆಯನ್ನಾದರೂ ನೋಡಿ ನಮ್ಮ ಜೀವನವನ್ನು ಕೃತಾರ್ಥರನ್ನಗಿಸಿಕೊಳ್ಳುವ ಅಲ್ಲವೇ?




Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ